ಬ್ರೇಡ್ ಜೇಮ್ಸ್   
	1795-1860. ಬ್ರಿಟಿಷ್ ವೈದ್ಯ. ಪ್ರೇರಿತ ನಿದ್ರೆಯ (ಹಿಪ್ನಾಸಿಸ್) ಸಂವಿಧಾನವನ್ನು ಕಂಡುಹಿಡಿದವನೆಂದು ಪ್ರಸಿದ್ಧನಾದವ. ಸ್ಕಾಟ್ಲೆಂಡಿನಲ್ಲಿ ಹುಟ್ಟಿದ್ದು. ಮ್ಯಾಂಚಸ್ಟರಿನಲ್ಲಿ ವೈದ್ಯಕೀಯ ವೃತ್ತಿಯನ್ನು ಅರಂಭಿಸಿದ. 1780-90ರಲ್ಲಿ ಪ್ಯಾರಿಸಿನಲ್ಲಿ ಪ್ರಚುರವಾಗಿದ್ದ ಮೆಸ್ಮರ್‍ನ ಮಾನಸಾಕರ್ಷಣ ಸಿದ್ಧಾಂತವನ್ನು ವಿಮರ್ಶಿಸಿ ಒಂದು ಪ್ರಬಂಧವನ್ನೂ 1843ರಲ್ಲಿ ಇದೇ ವಿಚಾರದ ಮೇಲೆ ಬೃಹದ್ಗ್ರಂಥವನ್ನೂ ಪ್ರಕಟಿಸಿ ಪ್ರಸಿದ್ಧನಾದ. ವೃತ್ತಿಯಲ್ಲಿ ವೈದ್ಯನಾದ ಬ್ರೇಡ್ ಈ ವಿಷಯವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿ ಪ್ರೇರಿತ ನಿದ್ರೆಯ ಸಂಭವವನ್ನು ನಿರೂಪಿಸಿದ. 1890ರಲ್ಲಿ ಡ್ಯುರಾಂಡ್ ಡಿ ಗ್ರೋಸ್ ಎಂಬಾತ ಪ್ರೇರಿತನಿದ್ರೆ ಎನ್ನುವುದಕ್ಕೆ ಬ್ರೇಡ್‍ಇಸಮ್ ಎಂದೇ ನಾಮಕರಣ ಮಾಡಿದ. ಈ ಸಿದ್ಧಾಂತಕ್ಕೆ ಮೊದಮೊದಲು ಎಲ್ಲರಿಂದಲೂ ವಿರೋಧ ಬಂದಿತು. ಈತ ಮೆಸ್ಮರ್‍ನ ಸಿದ್ಧಾಂತವನ್ನು ಒದಗಿಸುವ ಸಂವಿಧಾನವನ್ನು ಸ್ಪಷ್ಟಪಡಿಸಿದ. ಸಲಹೆಗಳೂ ಈ ಪ್ರಸಂಗದಲ್ಲಿ ನೆರವು ನೀಡುವುದೆಂದು ಮನಗಂಡ. 1881-82ರಲ್ಲಿ ಪ್ರೆಯೆರ್ ಎಂಬ ಮನಃಶಾಸ್ತ್ರಜ್ಞ ಬ್ರೇಡನ ಗ್ರಂಥಗಳನ್ನು ಜರ್ಮನ್ ಭಾಷೆಗೆ ಅನುವಾದಮಾಡಿದ. ಇದೇ ಸುಮಾರಿಗೆ ಲೆಬೋಲ್ ಎಂಬಾತ ಬ್ರೇಡನ ಸಂವಿಧಾನವನ್ನು ಪ್ರಯೋಗದಿಂದ ದೃಢಪಡಿಸಿ ರೋಗಗಳನ್ನು ಗುಣಪಡಿಸಲು ಅಳವಡಿಸಿದ.     (ಎಸ್.ಕೆ.ಅರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ